ಆತ್ಮಸಾಕ್ಷಿ -
ಒಳ್ಳೆಯದು, ಕೆಟ್ಟದ್ದು ಎಂಬುದನ್ನು ನಿರ್ಧರಿಸುವ ಆಂತರಿಕ ಪ್ರಮಾಣ. ಆಪ್ತವಚನ ಮತ್ತು ಶಾಸ್ತ್ರಾಧಾರಬಾಹ್ಯಪ್ರಮಾಣಗಳು. ಆಪ್ತವೆಂದರೆ ತಂದೆತಾಯಿಯರು, ಗುರುಹಿರಿಯರು, ಪೂರ್ವಾಚಾರ್ಯರು. ಶಾಸ್ತ್ರಗಳೆಂದರೆ ವೇದ, ಕುರಾನು, ಬೈಬಲ್ ಮೊದಲಾದ ಧಾರ್ಮಿಕ ಆಧಾರಗಳು. ಆತ್ಮಸಾಕ್ಷಿ ಈ ರೀತಿ ಬಾಹ್ಯವಲ್ಲ, ಬೇರೆಯವರಿಂದ ನಿಯೋಜಿತವಾದುದಲ್ಲ. ಆಂತರಿಕವಾದುದು, ನಮ್ಮೊಳಗಿನ ಸಾಕ್ಷಿರೂಪವಾದ ಚೇತನದಿಂದಲೇ ಹುಟ್ಟಿಬಂದುದು.

ಆತ್ಮಸಾಕ್ಷಿ ಕೇವಲ ವೈಯಕ್ತಿಕವೇ ಅಥವಾ ಅತೀತವಾದ ಚೇತನದ ಪ್ರತಿಬಿಂಬವೇ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ವೈಷ್ಣವಮತ, ಕ್ರೈಸ್ತಮತಗಳ ಪ್ರಕಾರ ಆತ್ಮಸಾಕ್ಷಿಯ ವಾಣಿ ಕೇವಲ ವೈಯಕ್ತಿಕವಲ್ಲ; ಅಂತರ್ಯಾಮಿಯಾದ ಭಗವಂತನ ವಾಣಿ; ಭಗವಂತನೇ ನಮ್ಮ ಹೃದಯಾಂತರಾಳದಲ್ಲಿದ್ದು ಯಾವುದು ಧರ್ಮ ಯಾವುದು ಅಧರ್ಮ ಎಂಬುದನ್ನು ಪ್ರಚೋದಿಸುತ್ತಾನೆ. ಯೆಹೂದಿ ಮತ್ತು ಇಸ್ಲಾಂ ಮತಗಳ ಪ್ರಕಾರ ಧರ್ಮಾಧರ್ಮಗಳು ದೇವರ ಆಜ್ಞೆ. ಅದು ಒಬ್ಬ ಪ್ರವಾದಿಯ ಮೂಲಕ ಬಂದು ನಿಯೋಜಿತವಾದದ್ದು; ನಮ್ಮೊಳಗಿನಿಂದ ಪ್ರಚೋದಿತವಾದುದಲ್ಲ; ದೇವರಿಂದ ದತ್ತವಾದದ್ದು. ಪ್ಲೇಟೊ ಮುಂತಾದ ಪ್ರಾಚೀನ ಗ್ರೀಕ್ ತಾತ್ವಿಕರ ದೃಷ್ಟಿ ಬೇರೆ. ಅಂತರ್ಯಾಮಿಯಾದ ಅಥವಾ ಅತೀತವಾದ ದೇವರಿಂದ ಪ್ರಚೋದಿತವಾದ ನಡವಳಿಕೆಯಲ್ಲ; ದೇವರ ಆಜ್ಞೆಗೆ ವಿಧೇಯವಾದ ನಡತೆಯಲ್ಲ. ವಿಚಾರಚೇತನದಿಂದ ಹುಟ್ಟಿದ ವಿವೇಕವೇ ಅದಕ್ಕೆ ಆಧಾರ. ಈ ವಿಚಾರಚೇತನವನ್ನು ಪ್ಲೇಟೊ ರಥಕ್ಕೆ ಕಟ್ಟಿದ ಕುದುರೆಗಳ ಓಟವನ್ನು ನಿಯಂತ್ರಿಸುವ ಸಾರಥಿಗೆ ಹೋಲಿಸಿರುತ್ತಾನೆ. ಭಗವದ್ಗೀತೆಯಲ್ಲೂ ಅದೇ ಉಪಮಾನವಿದೆ. ಆದರೆ ಅಲ್ಲಿ ಸಾರಥಿ ಕೇವಲ ವೈಚಾರಿಕಬುದ್ಧಿಯಲ್ಲ, ಅಂತರ್ಯಾಮಿಯಾದ ಕೃಷ್ಣ ಭಗವಾನ್.				
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ